ಕೇಂದ್ರ ಸರ್ಕಾರದಿಂದ ಸಿಗುತ್ತೆ ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ 25 ಲಕ್ಷ ಸಬ್ಸಿಡಿ

ನವದೆಹಲಿ:ರಾಷ್ಟ್ರೀಯ ಜಾನುವಾರು ಮಿಷನ್‌ ಪರಿಷ್ಕೃತ ಯೋಜನೆಯಡಿ ಕೇಂದ್ರ ಸರ್ಕಾರ ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ 25 ಲಕ್ಷ ಸಬ್ಸಿಡಿಯನ್ನು ನೀಡಲಾಗುತ್ತದೆ. ಈ ಯೋಜನೆಯು ಉದ್ಯೋಗ ಸೃಷ್ಟಿ, ಉದ್ಯಮಶೀಲತೆ, ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಮಾಂಸ, ಮೇಕೆ ಹಾಲು, ಮೊಟ್ಟೆ ಮತ್ತು ಉಣ್ಣೆಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹಾಗಾದ್ರೆ ನೀವು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಬೇಕಾ…? ಹಾಗಾದ್ರೆ ಈ ಮಾಹಿತಿ ಓದಿ….
ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನಾಗಾರಿಕೆ ಇಲಾಖೆಯು 2014-15ರಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯಡಿಯಲ್ಲಿ ಅಸಂಘಟಿತ ಗ್ರಾಮೀಣ ಕೋಳಿ ಸಾಕಾಣಿಕೆ ವಲಯವನ್ನು ಸಂಘಟಿತ ವಲಯಕ್ಕೆ ತರುವುದು, ಗ್ರಾಮೀಣ ಕೋಳಿ ಸಾಕಾಣಿಕೆ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಸುಸ್ಥಿರ ರೀತಿಯಲ್ಲಿ ಉತ್ತೇಜಿಸುವುದು, ವಿಭಿನ್ನ ಪರ್ಯಾಯ ಅಸಾಂಪ್ರದಾಯಿಕ ಕಡಿಮೆ ವೆಚ್ಚದ ಆಹಾರವನ್ನು ಜನಪ್ರಿಯಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಯೋಜನೆಯಡಿಯಲ್ಲಿ ಸ್ವಸಾಹಯ ಗುಂಪುಗಳು, ಎಫ್‌ಪಿಒ, ಎಫ್‌ಸಿಒ, ಜೆಎಲ್‌ಜಿ ಮತ್ತು ವಿಭಾಗ 8 ಕಂಪೆನಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯೋಜನಾ ವರದಿ, ಅರ್ಜಿ ಸಲ್ಲಿಸುವವರ ಪಹಣಿ, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಪಾಸ್‌ ಪೋರ್ಟ್‌ ಸೈಜ್‌ ಫೋಟೋ, ಜಾಗದ ಜಿಪಿಎಸ್‌ ಫೋಟೋ, ಕಳೆದ 6ತಿಂಗಳ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಹಾಗೂ ತರಬೇತಿ ಪ್ರಮಾಣ ಪತ್ರ ದಾಖಲೆಗಳನ್ನು ನೀಡಬೇಕು. ಈ ದಾಖಲೆಗಳೊಂದಿಗೆ ಅರ್ಜಿಯನ್ನು ಅರ್ಹ ಫಲಾನುಭವಿಗಳು https://nlm.udyamimitra.in/Login/Login ನಲ್ಲಿ ಸಲ್ಲಿಸಬಹುದಾಗಿದೆ.
ಇನ್ನು, ಕಾರ್ಯ ನಿರತ ಬಂಡವಾಳ, ವೈಯಕ್ತಿಕ ವಾಹನ, ಭೂ ಖರೀದಿ, ಬಾಡಿಗೆ ವೆಚ್ಚ ಮತ್ತು ಭೂ ಗುತ್ತಿಗೆಗೆ ಯಾವುದೇ ಸಬ್ಸಿಡಿ ನೀಡಲಾಗುವುದಿಲ್ಲ. ಒಟ್ಟು ಯೋಜನಾ ವೆಚ್ಚದ ಒಂದು ಬಾರಿಯ 50% ಬಂಡವಾಳ ಸಬ್ಸಿಡಿಯನ್ನು ಪ್ರತಿ ಘಟಕಕ್ಕೆ ಗರಿಷ್ಠ ರೂ.25 ಲಕ್ಷದವರೆಗೆ ಸಬ್ಸಿಡಿಯೊಂದಿಗೆ ಒದಗಿಸಲಾಗುತ್ತದೆ.

Leave a Comment