ಬೆಂಗಳೂರು: ರಾಜ್ಯದ ರೈತರಿಗೆ ಬಿಗ್ ಶಾಕ್ ಎದುರಾಗಿದ್ದು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿಸಿದ್ದ ರಾಜ್ಯದ 7 ಲಕ್ಷಕ್ಕೂ ಅಧಿಕ ರೈತರನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಅನರ್ಹಗೊಳಿಸಲಾಗಿದೆ.
ಭೂ ದಾಖಲೆಗಳಕೊರತೆ, ಇ-ಕೆವೈಸಿ ಸಮಸ್ಯೆ, ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ ಸೇರಿದಂತೆ ಅನೇಕ ಕಾರಣಾಂತರಗಳಿಂದ ಹಂತ ಹಂತವಾಗಿ ಪರಿಶೀಲಿಸಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದ ಸುಮಾರು ೭ಲಕ್ಷ ರೈತರನ್ನು ಅನರ್ಹಗೊಳಿಸಲಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಆರಂಭವಾದ ಒಂದು ವರ್ಷದಲ್ಲಿ 53.81ಲಕ್ಷಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರು. ಈ ಪೈಕಿ ಅರ್ಹರಲ್ಲದವರು ಕೂಡ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರಿಂದ ಪರಿಶೀಲನೆ ಕಾರ್ಯ ಆರಂಭಿಸಿ, ಅರ್ಹರಲ್ಲದ ಬರೋಬ್ಬರಿ 7ಲಕ್ಷಕ್ಕೂ ಅಧಿಕ ರೈತರನ್ನು ಅನರ್ಹಗೊಳಿಸಲಾಗಿದೆ.
ಇನ್ನು, ಆಧಾರ್ ಮತ್ತು ಆರ್‌ಟಿಸಿಯೊಂದಿಗೆ ಫ್ರೂಟ್ಸ್ ಐಡಿ ತಂತ್ರಾಂಸದಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಇ-ಕೆವೈಸಿಯೊಂದಿಗೆ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿ ವಾರ್ಷಿಕ 6,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. 3ಕಂತುಗಳಲ್ಲಿ 4ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗೆ 2ಸಾವಿರ ರೂ ವರ್ಗಾಯಿಸಲಾಗುತ್ತದೆ. ಒಂದೊಂಮ್ಮೆ ಜಮೀನಿನ ಮಾಲೀಕರು ನಿಧನರಾಗಿದ್ದಲ್ಲಿ ಇತರೆ ವಾರಸುದಾರರು ಪೌತಿ ಖಾತೆ ಮಾಡಿಸಿದರೆ ಕಿಸಾನ್ ಸಮ್ಮಾನ್ ಯೋಜನೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
